ತರಲೀಕರಣ
 	
ಪೆಟ್ರೋಲಿಯಮ್, ಕಲ್ಲಿದ್ದಲು, ಲೋಹ, ಗಣಿ ಮುಂತಾದ ರಾಸಾಯನಿಕ ಉದ್ಯಮಗಳಲ್ಲಿ ಘನ ಹಾಗೂ ತರಲ ವಸ್ತುಗಳನ್ನು ಜೊತೆಯಾಗಿ  ಸಂಸ್ಕರಿಸಲು ಬಳಸುವ ಒಂದು ತಂತ್ರ  (ಫ್ಲೂಯಿಡೈಸೇಷನ್).  ಪುಡಿ ಮಾಡಿದ ಘನ ಪದಾರ್ಥದ ಮೂಲಕ ತರಲವೊಂದನ್ನು ಹಾಯಿಸಿದಾಗ ಘನ ಪದಾರ್ಥ ತರಲದಲ್ಲಿ ತೇಲಿಬಿಟ್ಟಂತಾಗಿ ಪೂರ್ತಿ ಬೆರೆತು ಹೋಗುವುದು.  ಈ ಮಿಶ್ರಣ ಎಷ್ಟೊ ವಿಧದಲ್ಲಿ ತರಲದಂತೆಯೇ ವರ್ತಿಸುವುದರಿಂದ ಘನ ವಸ್ತು ತರಲೀಕೃತವಾಗಿದೆ ಎನ್ನುತ್ತಾರೆ.  ಪ್ರಕ್ರಿಯಾ ಕೋಷ್ಠದಲ್ಲಿರುವ (ಪ್ರೋಸೆಸಿಂಗ್ ಚೇಂಬರ್) ಪುಡಿ ಮಾಡಿದ ಘನ ಪದಾರ್ಥದ ಮೂಲಕ ತರಲವನ್ನು ಹಾಯಿಸಲು ರೋಧವಿರುವುದು.  ಘನವಸ್ತುವಿನ ಮೇಲ್ಮೈ ಹಾಗೂ ತರಲದ ಅಣುಗಳ ನಡುವಣ ಘರ್ಷಣೆ ಇದರ ಕಾರಣ.  ತರಲದ ವೇಗದೊಡನೆ ಈ ರೋಧವೂ ಹೆಚ್ಚುತ್ತದೆ.  ವೇಗ ಒಂದು ನಿಯತ ಬೆಲೆಯನ್ನು ಮೀರಿದಾಗ ಘನ ಪದಾರ್ಥ ತರಲದಲ್ಲಿ ಸ್ವಲ್ಪ ಮಟ್ಟಿಗೆ ಒಯ್ಯಲ್ಪಟ್ಟು ಕುದಿಯುತ್ತಿರುವ ದ್ರವದಂತೆ ತೀವ್ರ ಚಲನೆಯಲ್ಲಿ ತೊಡಗುತ್ತದೆ.  ತರಲದ ಈ ವೇಗಕ್ಕೆ ತರಲೀಕರಣ ವೇಗ ಎಂದು ಹೆಸರು.  ಇದು ತರಲ ಮತ್ತು ಘನ ವಸ್ತುವಿನ ಸಾಂದ್ರತೆ ಪುಡಿಯ ಗಾತ್ರ ಮತ್ತು ಆಕಾರಗಳನ್ನು ಅವಲಂಬಿಸಿದೆ. ಘನವಸ್ತುವಿನ ಈ ರೀತಿಯ ಚಲನೆಯಿಂದಾಗಿ ಘನವಸ್ತು ಮತ್ತು ತರಲ ಪರಸ್ಪರ ಚೆನ್ನಾಗಿ ಬೆರೆತುಹೋಗಿ ಅವೆರಡರ ನಡುವಣ ಉಷ್ಣ ಅಥವಾ ತೇವಾಂಶ ವಿನಿಮಯವೇ  ಆಗಲಿ ಮತ್ತಾವ ಭೌತ ಅಥವಾ ರಾಸಾಯನಿಕ ಬದಲಾಣೆಯೇ ಆಗಲಿ ಸುಲಭದಲ್ಲಿ ನೆರವೇರುತ್ತದೆ. 

	ತರಲೀಕೃತ ವಸ್ತು ಮತ್ತು ತರಲದ ಪರಸ್ಪರ ತಾಕಿದಂತಿರುವ ಮೇಲ್ಮೈ ಸಲೆ ಹೆಚ್ಚಾಗಿದ್ದು ರಾಸಾಯನಿಕ ಪ್ರಕ್ರಿಯೆಯ ಕ್ಷಿಪ್ರ ನೆರವೇರುವಿಕೆ, ಎರಡೂ ಪರಸ್ಪರ ಚೆನ್ನಾಗಿ ಕಲೆತು ಹೋಗಿರುವುದರಿಂದ ಅವುಗಳ ನಡುವಣ ಉಷ್ಣತೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಿರುವಿಕೆ, ಅವುಳ ನಡುವಣ ಉಷ್ಣ ಮತ್ತು ತೇವಾಂಶ ವಿನಿಮಯ ವೇಗದ ಆಧಿಕ್ಯ, ಘನವಸ್ತುವಿನ ಸತತ ಸಂಸ್ಕರಣೆಯ ಸಾಧ್ಯತೆ ಹಾಗೂ ಪ್ರಕ್ರಿಯೆಗೆ ಬೇಕಾದ ಮಾನವ ಯತ್ನದಲ್ಲಿ ಉಳಿತಾಯ — ಇವು ತರಲೀಕರಣ ತಂತ್ರದ ಹಲವು ವಿಶೇಷತೆಗಳು.  ಅಂತೆಯೇ ಸಂಸ್ಕರಣೆಗೆ ಬೇಕಾಗುವ ಶಕ್ತಿಯ ಆಧಿಕ್ಯ ಮತ್ತು ಪ್ರಕ್ರಿಯೆ ಪುಡಿ ಮಾಡಿದ ಘನವಸ್ತುಗಳಿಗೆ ಮಾತ್ರ ಸೀಮಿತವಾಗಿರುವುದು ಈ ತಂತ್ರದ ನ್ಯೂನತೆಗಳು.

	ಘನವಸ್ತುವಿನ ತರಲೀಕರಣವನ್ನು ಬಳಸಿ ಕಾರ್ಯಾಚರಣೆ ನಡೆಸುವ ಹಲವು ಪ್ರಕ್ರಿಯೆಗಳು ಈ ಮುಂದಿನವು:  ಪಟುಗೊಳಿಸಿದ ಇಂಗಾಲ, ಸಿಮೆಂಟ್, ಕಾರ್ಬನ್ ಡೈ ಸಲ್ಫೈಡ್ ಮುಂತಾದವುಗಳ ತಯಾರಿಕೆ, ಮಂದವಾದ ಪೆಟ್ರೋಲಿಯಮ್ ಎಣ್ಣೆಯ ವೇಗವರ್ಧಿತ ವಿಭಜನೆ, ಪುಡಿಮಾಡಿದ ಕಲ್ಲಿದ್ದಲನ್ನು ಉರಿಸಿ ಇಂಧನಾನಿಲದ ತಯಾರಿಕೆ, ಚಿನ್ನ, ಸತು ಮುಂತಾದ ಅದುರುಗಳನ್ನು ಬಿಸಿ ಮಾಡುವಿಕೆ, ಹಲವು ಲೋಹದ ಯಂತ್ರಗಳ ಬಿಡಿ ಭಾಗಗಳ ಮೇಲೆ ಪುಡಿ ಮಾಡಿದ ಪ್ಲಾಸ್ಟಿಕ್ ಲೇಪನ ಹಾಗೂ ಕೆಲವು ಘನ ಪದಾರ್ಥಗಳನ್ನು ಬಿಸಿ ಗಾಳಿಯ ಸಹಾಯದಿಂದ ಒಣಗಿಸುವಿಕೆ ; ಇತ್ಯಾದಿ 									(ಎ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ